ಜುಗಾರಿ ತುಳು ಚಿತ್ರದ ಮುಹೂರ್ತ ಸಮಾರಂಭ
Posted date: 16 Thu, Jul 2015 – 08:41:36 AM

ಮಂಗಳೂರು: ‘ನೈನ್ ಓ ಕ್ಲಾಕ್ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಪಮ್ಮಿ ಕೊಡಿಯಾಲ್‌ಬೈಲ್ ಹಾಗೂ ಆರ್.ಧನ್‌ರಾಜ್ ನಿರ್ಮಾಣದ  ‘ಜುಗಾರಿ ತುಳು ಚಲನಚಿತ್ರದ ಮುಹೂರ್ತ ಸಮಾರಂಭ ಗುರುವಾರ ಶ್ರೀ ಭಗವತೀ ದೇವಸ್ಥಾನದ ಬಳಿಯ ಪಿ.ವಿ.ಎಸ್. ಕಲಾಕುಂಜದಲ್ಲಿ ನೆರವೇರಿತು.
ಕನ್ನಡ ಚಿತ್ರರಂಗದ ನಟಿ ರಾಗಿಣಿ ದ್ವಿವೇದಿ ಆರಂಭದ ಫಲಕ ತೋರಿಸುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಶಾಂಭವಿ ಮುಹೂರ್ತ ಕಾರ್ಯಕ್ರಮ ಉದ್ಘಾಟಿಸಿದರು.
‘ಕುಡ್ಲದ ಜನಕುಲೆಗ್ ಎನ್ನಸೊಲ್ಮೆಲು ಎಂದು ಮಾತು ಪ್ರಾರಂಭಿಸಿದ ರಾಗಿಣಿ ದ್ವಿವೇದಿ, ತುಳು ಚಿತ್ರರಂಗದಲ್ಲಾಗುತ್ತಿರುವ ಅಭಿವೃದ್ಧಿ, ಬೆಳೆಯುತ್ತಿರುವ ಪರಿ ಕೇಳಿ ಬಹಳಷ್ಟು ಸಂತೋಷವಾಗಿದೆ. ಇಲ್ಲಿನ ಸಾಕಷ್ಟು ನೂತನ ಪ್ರತಿಭೆಗಳು ಸಿನಿಮಾರಂಗಕ್ಕೆ ಪಾದಾರ್ಪಣೆಗೈಯ್ಯುತ್ತಿರುವುದು ಅಭಿನಂದನಾರ್ಹ. ಉತ್ತಮ ಸಂದೇಶದೊಂದಿಗೆ ನೂತನವಾಗಿ ನಿರ್ಮಾಣವಾಗುತ್ತಿರುವ ‘ಜುಗಾರಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ಚಿತ್ರ ನಿರ್ದೇಶಕ ಆನಂದ್ ಪಿ. ರಾಜು ಮಾತನಾಡಿ, ಕನ್ನಡದಲ್ಲಿ ನಾನು ಸಾಕಷ್ಟು ಚಿತ್ರಕ್ಕೆ ನಿರ್ದೇಶನ ಮಾಡಿದ್ದೇನೆ. ‘ಜುಗಾರಿಯಿಂದ ದೂರವಿರಿ ಎಂದು ಸಂದೇಶ ನೀಡುವ ಈ ತುಳು ಚಿತ್ರಕ್ಕೂ  ನಿರ್ದೇಶನ ಮಾಡುತ್ತಿದ್ದೇನೆ. ಜನರ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದರು. ಚಿತ್ರದ ನಾಯಕ ನಟ ಕಾರ್ತಿಕ್ ಬಂಜನ್ ಮಾತನಾಡಿ, ನಾನು ಈ ಹಿಂದೆ ನಟಿಸಿದ ರಿಕ್ಷಾ ಡ್ರೈವರ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರಕಿದೆ. ಪ್ರಸ್ತುತ ಹೊಸ ಚಿತ್ರಕ್ಕೂ  ಪ್ರೋತ್ಸಾಹದೊಂದಿಗೆ ಯಶಸ್ಸು ದೊರೆಯುವಂತೆ ಎಲ್ಲ ಜನರು ಆಶೀರ್ವದಿಸಬೇಕು ಎಂದರು. ನಟಿ ಎಸ್ತೇರ್ ನೊರೊನ್ಹ ‘ಎಕ್ಕಸಕ ಚಿತ್ರದ ನಿರ್ಮಾಪಕ ಕಿಶೋರ್ ಡಿ ಶೆಟ್ಟಿ ,ಕುಲಾಲ ಯುವ ವೇದಿಕೆ ಅಧ್ಯಕ್ಷ ತೇಜಸ್ವಿರಾಜ್, ‘ಸೂಂಬೆ ಚಿತ್ರ ನಿರ್ದೇಶಕ ಸಾಯಿಕೃಷ್ಣ, ‘ರಂಗ್ ಚಿತ್ರ ನಿರ್ಮಾಪಕ ದೇವದಾಸ್ ಪಾಂಡೇಶ್ವರ್, ಚಿತ್ರನಟ ಅಮಿತ್ ರಾವ್, ಮಾಜಿ ಸಚಿವ ಅಮರನಾಥ್ ಶೆಟ್ಟಿ  ಚಿತ್ರಕ್ಕೆ ಶುಭ ಹಾರೈಸಿದರು.
‘ಜುಗಾರಿ ಚಿತ್ರ ನಿರ್ಮಾಪಕರಾದ ಪಮ್ಮಿ ಕೊಡಿಯಾಲ್‌ಬೈಲ್ ಹಾಗೂ ಆರ್. ಧನ್‌ರಾಜ್, ಪ್ರಮುಖರಾದ ಸೂರಜ್ ಶೆಟ್ಟಿ ರಾಜಗೋಪಾಲರೈ, ಗಂಗಾಧರ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಸದಾಶಿವದಾಸ್ ಪಾಂಡೇಶ್ವರ್, ನವೀನ್ ಚಂದ್ರ, ಡಿ.ಕೆ. ಅಶೋಕ್ ಹಾಗೂ ಎನ್ನಾರ್ ಕೆ. ವಿಶ್ವನಾಥ, ರಾಧಾಕೃಷ್ಣ ಶೆಟ್ಟಿ, ಸುನೀತಾ, ಗಿರೀಶ್ ಶೆಟ್ಟಿ, ನಿರ್ಮಾಣ ಮೇಲ್ವಿಚಾರಕರಾದ ಚೇತನ್ ಬರ್ಕೆ, ಗೋಪಾಲ ಗಟ್ಟಿ, ನಟ ಚೇತನ್‌ರೈ ಮಾಣಿ ಉಪಸ್ಥಿತರಿದ್ದರು.
ಹಿಂದಿ, ತೆಲುಗು ಚಿತ್ರದಲ್ಲಿ ನಟಿಸಿರುವ ಎಸ್ತೇರ್ ನೊರೊನ್ಹಾ ‘ಜುಗಾರಿ ಚಿತ್ರದ ನಾಯಕಿ. ಅಮಿತ್‌ರಾವ್, ನವೀನ್‌ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಶೋಭರಾಜ್, ಸಂತೋಷ್ ಶೆಟ್ಟಿ, ಗೋಪಿನಾಥ್ ಭಟ್, ಸತೀಶ್ ಬಂದಲೆ, ಚೇತನ್‌ರೈ ಮಾಣಿ, ಸಾಜನ್ ಶೆಟ್ಟಿ, ಶೋಭಾ ರೈ, ಅಲೀಷಾ ಮೊದಲಾದವರು ತಾರಾಂಗಣದಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶಕರಾಗಿದ್ದಾರೆ. ಸುರೇಶ್ ಬಾಬು ಛಾಯಾಚಿತ್ರಗ್ರಹಣ ಮಾಡಲಿದ್ದು, ಶಿವರಾಜ್ ಮೇಹು ಸಂಕಲನ, ಕೌರವ ವೆಂಕಟೇಶ್ ಅವರ ಸಾಹಸ ಇದೆ. ಪಮ್ಮಿ ಕೊಡಿಯಾಲ್‌ಬೈಲ್ ಅವರ ಕಥೆಗೆ ಎನ್ನಾರ್ ಕೆ. ವಿಶ್ವನಾಥ್ ಅವರು ವಿಸ್ತಾರ ರೂಪ ನೀಡಿದ್ದಾರೆ. ಸತೀಶ್ ಬ್ರಹ್ಮಾವರ್ ಚಿತ್ರದ ನಿರ್ಮಾಣ ನಿರ್ವಹಣೆ ಮಾಡಲಿದ್ದಾರೆ.
ತುಳುವಿನಲ್ಲೂ ನಟಿಸಲು ರಾಗಿಣಿ ರೆಡಿ!
‘ಉದಯವಾಣಿಯೊಮದಿಗೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ತುಳು ಚಿತ್ರರಂಗದಲ್ಲಿ ಹೊಸ ಹೊಸ ಚಿತ್ರಗಳು, ಅತ್ಯಂತ ಯಶಸ್ವೀ ದಾಖಲೆ ಮೂಲಕ ಹೊರ ಬರುತ್ತಿವೆ. ಹೀಗಾಗಿ ತುಳುವಿನಲ್ಲಿ ಉತ್ತಮ ಕಥೆ ದೊರೆತರೆ ನಾನು ಕೂಡಾ ನಟಿಸಲು ಸಿದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕನ್ನಡ ಹಾಗೂ ತೆಲುಗುವಿನಲ್ಲಿ ಪ್ರಸ್ತುತ ತನಗೆ ಉತ್ತಮ ಅವಕಾಶಗಳಿವೆ. ಮಾತೃಭಾಷೆಗೆ  ಮೊದಲ ಆದ್ಯತೆ ನೀಡಿ, ಬಳಿಕ ಇತರ ಭಾಷೆಗಳ ಚಿತ್ರಕ್ಕೆ ಗಮನ ನೀಡಲಾಗುವುದು ಎಂದರು.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed